ಕೊಳವೆ ಬಾವಿ

ಭೂಮಿಯ ಮೇಲ್ಮೈಯಿಂದ ಕೆಳಗೆ ಹಲವಾರು ಪದರಗಳಲ್ಲಿ ಹುದುಗಿರುವ ಜಲವನ್ನು ಮೇಲಕ್ಕೆತ್ತುವ ಉದ್ದೇಶದಿಂದ ತೋಡುವ ಕೊಳವೆ ಆಕಾರದ ಬಾವಿ (ಬೋರ್ ವೆಲ್). ಮಳೆಯ ನೀರು ನೆಲದ ಮೇಲೆ ಬಿದ್ದು ಅದರ ಒಂದು ಭಾಗ ನೆಲದೊಳಗೆ ಸೋಸಿ ನೆಲಮಟ್ಟದಿಂದ ಕೆಳಗಿರುವ ಹಲವಾರು ಮರಳು ಪದರಗಳಲ್ಲಿ ಬಹುಮಂದವಾಗಿ ಹರಿಯುತ್ತಿರುತ್ತದೆ. ಇಂಥ ಪದರಗಳು ನೆಲಮಟ್ಟದಿಂದ ಬಹು ಆಳವಾಗಿದ್ದ ಪಕ್ಷದಲ್ಲಿ ಆ ಜಲವನ್ನು ಎಟುಕಿಸಿಕೊಳ್ಳಬೇಕಾದರೆ ಸಾಮಾನ್ಯವಾದ ತೆರೆದ ಬಾವಿಗಳನ್ನು ತೋಡಲು ದುಸ್ಸಾಧ್ಯವೂ ಅತಿ ವೆಚ್ಚವೂ ಆಗುತ್ತದೆ. ಅಂಥ ಪರಿಸ್ಥಿತಿಯಲ್ಲಿ ಕೊಳವೆ ಬಾವಿಗಳ ಬಳಕೆಯಿಂದ ಕಾರ್ಯಸಾಧನೆಯಾಗುತ್ತದೆ. ಯಂತ್ರೋಪಕರಣಗಳಿಂದ ಭೂಮಿಯ ಮೇಲ್ಪದರಗಳನ್ನು ಕೊರೆದು ಕೆಳಗಿನ ಜಲಮಯ ಪದರಗಳನ್ನು ಮುಟ್ಟಬಹುದು. ನೀಳವಾದ ಮತ್ತು ಭಾರದಿಂದ ಕೂಡಿದ ಸಲಾಕೆಯ ಕೊನೆಯಲ್ಲಿ ಉಕ್ಕಿನ ಅಲಗನ್ನು ಸಿಕ್ಕಿಸಿ ಯಂತ್ರಗಳ ಜೋಡಣೆಯಿಂದ ಆ ಸಲಾಕೆಯನ್ನು ತೂಕವಾಗಿ ನಿಲ್ಲಿಸಿ ತಿರುಗಿಸಿದರೆ ಅಲಗು ಭೂಮಿಯನ್ನು ಕೊರೆದುಕೊಂಡು ಇಳಿಯುತ್ತದೆ. ಈ ರೀತಿಯಾಗಿ ಇಳಿದ ಸಲಾಕೆಯ ಮೇಲ್ಭಾಗಕ್ಕೆ ಮತ್ತೊಂದು ಸಲಾಕೆಯನ್ನು ಪೋಣಿಸಿ ಇಳಿಸುತ್ತ ಹೋದರೆ ಹೆಚ್ಚು ಆಳದಲ್ಲಿರುವ ಜಲಪದರವನ್ನು ಅಥವಾ ಪದರಗಳನ್ನು ಮುಟ್ಟಬಹುದು. ಮೇಲೆ ತಿಳಿಸಿದ ಸಲಾಕೆ ಘನ (ಸಾಲಿಡ್) ಆಗಿರಬಹುದು. ಅದು ಕೊಳವೆ ರೂಪದಲ್ಲಿದ್ದರೆ ಕೊರೆತ ಮುಂದುವರಿಯುತ್ತಿರುವಾಗ ನೆಲದಿಂದ ಬಂದ ಮಣ್ಣು ಅಥವಾ ನೀರಿನಿಂದ ಮಿಶ್ರವಾದ ಮಣ್ಣನ್ನು ಮೇಲಕ್ಕೆ ತರಲು ಸುಲಭವಾಗುವುದು. ಹೀಗಿಲ್ಲದೆ ಘನರೂಪ ಸಲಾಕೆಯನ್ನು ಉಪಯೋಗಿಸಿದರೆ ಪದೇಪದೇ ಸಲಾಕೆಯನ್ನು ಮೇಲಕ್ಕೆ ಎತ್ತಿ ಪುಡಿಯಾದ ಮಣ್ಣನ್ನು ದ್ರವರೂಪದಲ್ಲಿ ರೇಚಕಯಂತ್ರದ ಮೂಲಕ ಹೊರತೆಗೆಯಬೇಕಾಗುತ್ತದೆ. ಬಹು ಮೆತುವಾದ ಮಣ್ಣಿನಲ್ಲಿ ಕೊಳವೆ ಬಾವಿಯನ್ನು ತೋಡಬೇಕಾದರೆ ಬಾವಿಯ ಸುತ್ತಲಿನ ಮಣ್ಣು ಜಾರಿ ಬರದಂತೆ ಒಂದು ಕಬ್ಬಿಣದ ಕೊಳವೆಯನ್ನು ಅಲಗಿನ ಮಟ್ಟದಲ್ಲಿ ಇಳಿಸಿಕೊಂಡು ಹೋಗಬೇಕಾಗುತ್ತದೆ. ಈ ಕೊಳವೆ ಬಾವಿ ತೋಡಿಯಾದ ಮೇಲೆಯೂ ಭೂಮಿಯಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಸಾಧಾರಣವಾದ ಕೊಳವೆ ಬಾವಿಗಳಿಂದ ನೀರನ್ನು ಹೊರತೆಗೆಯಬೇಕಾದರೆ ರೇಚಕ ಸಲಕರಣೆಗಳನ್ನು ಉಪಯೋಗಿಸಬೇಕಾಗುತ್ತದೆ. ಆದರೆ ಊಟೆಗಳಿರುವ ಕಡೆ ತೋಡಿದ ಕೊಳವೆ ಬಾವಿಗಳಲ್ಲಿ ಈ ಸಲಕರಣೆಗಳು ಬೇಕಾಗುವುದಿಲ್ಲ. ನದಿ ಕಾಲುವೆಗಳಿಂದ ದೂರವಾಗಿರುವ ಪ್ರದೇಶ, ಅಥವಾ ಪಟ್ಟಣಗಳಿಗೆ ನೀರಾವರಿ, ಅಥವಾ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾದಲ್ಲಿ ಕೊಳವೆ ಬಾವಿಗಳು ಸುಲಭಸಾಧ್ಯವೂ ಉಪಯುಕ್ತವೂ ಆಗುತ್ತವೆ.
(ಕೆ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ